ನುಗು ಜಲಾಶಯ -
	ಬೀರ್ವಾಳಿನ ಬಳಿ ಈ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.

	ಇಲ್ಲಿ ನದಿಯ ಜಲಾನಯನ ಭೂಮಿ ಸುಮಾರು 775 ಚಕಿಮೀ. ಕೆಳಗಡೆ ಲಕ್ಷ್ಮಣಾಪುರ ಮತ್ತು ಮುಳ್ಳೂರಿನ ಬಳಿ ಇರುವ ಅಣೆಕಟ್ಟುಗಳಿಂದ ಸಾಗುವಳಿಯಾಗುತ್ತಿರುವ 1460 ಹೆಕ್ಟೇರ್ ಜಮೀನಿಗೆ ನೀರನ್ನು ಮೀಸಲಾಗಿ, ಇಟ್ಟು ಈ ಅಣೆಕಟ್ಟಿನ ಕೆಳಗಡೆ 8,100 ಹೆಕ್ಟೇರುಗಳಿಗಾಗಿ 226,560,000 ಘನಮೀಟರ್ ನೀರನ್ನು ಬಳಸಲಾಗುತ್ತದೆ. 

	ನದೀತಳದಲ್ಲಿ 238 ಮೀ ಉದ್ದದ ಕಲ್ಲುಗಾರೆಯ ಕಟ್ಟೆಯನ್ನೂ ಬಲದಡದಲ್ಲಿ 378 ಮೀ ಉದ್ದದ ಮಣ್ಣಿನ ಏರಿಯನ್ನೂ ಕಟ್ಟಿದೆ. ಕಟ್ಟೆಯ ಎತ್ತರ ನದೀತಳದ ಮೇಲೆ 35 ಮೀ. ನದಿಯಲ್ಲಿ ಬರುವ ಸೆಕೆಂಡಿಗೆ 850 ಘನ ಮೀಟರ್ ಪ್ರವಾಹವನ್ನು 3 ಮೀ ಅಗಲ, 6 ಮೀ ಎತ್ತರದ ಒಂದು ಕೆಳಮಟ್ಟದ ಬಾಗಿಲಿನಿಂದಲೂ 9 ಮೀ ಅಗಲ, 6 ಮೀ ಎತ್ತರದ ಎರಡು ಕೋಡಿಯ ಬಾಗಿಲುಗಳಿಂದಲೂ ಹೊರಕ್ಕೆ ಬಿಡುತ್ತಾರೆ.

	ಬಲದಡದಲ್ಲಿ ಮೇಲಿನ ಮಟ್ಟದ ನಾಲೆ ನದೀ ತಳದ ಮೇಲೆ 15 ಮೀ ಎತ್ತರದಿಂದ ಹೊರಡುತ್ತದೆ. ಇದರ ಮೇಲೆ 36 ಮೀ ಮಟ್ಟದ ವರೆಗೆ ಇರುವ 138,768,000 ಕೋಟಿ ಘನ ಮೀಟರ್ ನೀರನ್ನು 81,00 ಹೆಕ್ಟೇರುಗಳ ನೀರಾವರಿಗೆ ಉಪಯೋಗಿಸಿದ್ದಾರೆ. ಪ್ರಾರಂಭದಲ್ಲಿ ನಾಲೆಯ ಅಗಲ 9.75 ಮೀ., ಆಳ 2.5 ಮೀ. ಈ ನಾಲೆ 88.5 ಕಿಮೀ ದೂರ ಹರಿದು ನರಸಾಂಬುದಿ ಕೆರೆಯೊಳಕ್ಕೆ ಬೀಳುತ್ತದೆ. ಈ ಕೆರೆಯಿಂದ ಮತ್ತೊಂದು ಶಾಖೆಯನ್ನು ತೆಗೆದು ಈಗ ಸಾಗುವಳಿಯಾಗುತ್ತಿರುವ 485 ಹೆಕ್ಟೇರ್ ಜೊತೆಗೆ ಇನ್ನೂ 325 ಹೆಕ್ಟೇರಿಗೆ ನೀರನ್ನು ಒದಗಿಸುತ್ತಾರೆ. ಸಮುದ್ರಮಟ್ಟದಿಂದ 727 ಮೀ ಎತ್ತರದಲ್ಲಿರುವ ಕಟ್ಟೆಯ ಮೇಲಿನ ರಸ್ತೆಯ ಅಗಲ 5.5 ಮೀ. ಈ ಕಟ್ಟೆಗೆ 184 ಲಕ್ಷ ರೂಪಾಯಿಗಳ ಮತ್ತು ನಾಲೆಗೆ 163 ಲಕ್ಷ ರೂಪಾಯಿಗಳ ವೆಚ್ಚತಗುಲಿತು.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ